ಹುಕರ್, ರಿಚರ್ಡ್
	1554-1600. ಇಂಗ್ಲಿಷ್ ಗದ್ಯ ಬರೆಹಗಾರ ಮತ್ತು ಮತೋಪದೇಶಕ. ಎಕ್ಸೀಟರ್ ಎಂಬಲ್ಲಿ 1554ರಲ್ಲಿ ಜನಿಸಿದ. ಈತನ ತಂದೆತಾಯಿಗಳು ಬಡವರು. ಆಕ್ಸ್‍ಫರ್ಡ್‍ನಲ್ಲಿ ವಿದ್ಯಾಭ್ಯಾಸ ಮಾಡಿ, 1584ರಲ್ಲಿ ಹೀಬ್ರೂ ಭಾಷೆಯನ್ನು ಬೋಧಿಸುವ ಡೆಪ್ಯುಟಿ ಪ್ರೊಫೆಸರ್ ಆಗಿ ಆಕ್ಸ್‍ಫರ್ಡ್‍ನ ಕಾರ್ಪಸ್ ಕ್ರಿಸ್ಟ್ ಕಾಲೇಜಿಗೆ ಸೇರಿದ. ತನ್ನ ಸಹೋದ್ಯೋಗಿ ವಾಲ್ಟರ್ ಟ್ರ್ಯಾವರ್ಸ್‍ನೊಂದಿಗೆ ಧಾರ್ಮಿಕತತ್ತ್ವಗಳ ವಿಷಯದಲ್ಲಿ ವಾದಮಾಡಿ ವಿಜಯಿಯಾದರೂ ತನ್ನ ಪ್ರತಿವಾದಿಯ ಬಗೆಗೆ ತನಗಿದ್ದ ಗೌರವದಿಂದ ಬೇರೆ ಕಡೆ ಹೋಗಿ ನೆಲಸಿದ.

	ಇವನ ಮಹಾಕೃತಿ ಎಕ್‍ಲೀಸಿಯಾಸ್ಟಿಕಲ್ ಪಾಲಿಟಿ ಎಂಟು ಸಂಪುಟಗಳಲ್ಲಿ ಇದರ ಮೊದಲ ನಾಲ್ಕು ಪುಸ್ತಕಗಳು 1594ರಲ್ಲೂ ಐದನೆಯದು 1597ರಲ್ಲೂ ಆರು ಮತ್ತು ಎಂಟನೆಯ ಭಾಗಗಳು 1648ರಲ್ಲೂ ಏಳನೆಯ ಭಾಗ 1662ರಲ್ಲೂ ಪ್ರಕಟವಾದುವು. ಆರನೆಯ ಪುಸ್ತಕದ ಕರ್ತೃತ್ವದ ವಿಷಯದಲ್ಲಿ ಸಂದೇಹವಿದೆ. ರಾಣಿ ಎಲಿಜಬೆತಳ ಯುಗದ ಇಂಗ್ಲೆಂಡನ್ನು ಮತ್ತು ಚರ್ಚ್ ಆಫ್ ಇಂಗ್ಲೆಂಡನ್ನು ಸಮರ್ಥಿಸುವ ಕೃತಿ ಇದು. ತರ್ಕ ಮತ್ತು ವಾಗ್ಮಿತೆಗಳಲ್ಲಿ ಮನಸೆಳೆಯುವ ಕೃತಿ. ಈತ ಪೂರಿಟನರ ಅಸಹನೆಯನ್ನು ವಿರೋಧಿಸಿ ಸಹನೆಯ ಮನೋಧರ್ಮವನ್ನು ಪ್ರತಿಪಾದಿಸಿದ್ದಾನೆ. ಐದನೆಯ ಪುಸ್ತಕ ಬಹು ಮುಖ್ಯವಾದುದು. ಇಲ್ಲಿ ಈತ ಮಹಾಧರ್ಮತತ್ತ್ವಗಳನ್ನು ವಿಮರ್ಶಿಸಿ ದ್ದಾನೆ. ಬಹು ವಾದಗ್ರಸ್ತವಾದ ವಿಷಯಗಳನ್ನು ಸಂಯಮದಿಂದಲೂ ಸಮಾಧಾನದಿಂದಲೂ ಗಾಂಭೀರ್ಯದಿಂದಲೂ ಈತ ಪರಿಶೀಲಿಸಬಲ್ಲವ ನಾಗಿದ್ದ. ಇವನ ಬರೆವಣಿಗೆಯಲ್ಲಿ ಒರಟುತನವಾಗಲಿ, ಉದ್ವೇಗವಾಗಲಿ ಎಲ್ಲಿಯೂ ಕಂಡುಬರುವುದಿಲ್ಲ. ಧರ್ಮದ ತಿರುಳನ್ನರಿತ ಚೇತನದ ಗಾಂಭೀರ್ಯ ಮತ್ತು ಸಮಚಿತ್ತವನ್ನು ಇವನ ಕೃತಿಯಲ್ಲಿ ಕಾಣಬಹುದಾಗಿದೆ.							
	(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ